ಆಂಟೋನಿಯಸ್ ಮಾರ್ಕಸ್
ಕ್ರಿ.ಪೂ. (83 -30) ಜೂಲಿಯಸ್ ಸೀಸóರನ ಕಾಲದಲ್ಲಿ ಅವನ ಆತ್ಮೀಯ ಸ್ನೇಹಿತನಾಗಿದ್ದು ಅನಂತರ ರೋಂ ರಾಜ್ಯದ ಸರ್ವಾಧಿಕಾರಿಗಳಲ್ಲೊಬ್ಬನಾಗಿ ಕೊಂಚಕಾಲ ಅಧಿಕಾರ ಮೆರೆಸಿ, ಅನಂತರ ವಿಷಯಲೋಲುಪತೆಯಿಂದ ಪ್ರಾಣವನ್ನು ಕಳೆದುಕೊಂಡ ಈತ ಷೇಕ್ಸ್‍ಪಿಯರ್‍ನ ಎರಡು ನಾಟಕಗಳಲ್ಲಿ ಚಿರಸ್ಮರಣೀಯನಾಗಿದ್ದಾನೆ. ರಾಜಕೀಯದಲ್ಲಿ ಈತ ಮುಂದೆ ಬಂದದ್ದು ಸೀಸóರನ ಸಹಾಯದಿಂದ. ಸೀಸóರನ ಕೊಲೆಯಾದ ಮೇಲೆ (ಕ್ರಿ.ಪೂ. 44) ಆಕ್ಟೇವಿಯಸ್‍ನ (ನೋಡಿ- ಅಗಸ್ಟಸ್-ಅಕ್ಟೇವಿಯಸ್) ಜೊತೆಗೂಡಿಕೊಂಡು ರೋಂ ರಾಜ್ಯದ ನಾಯಕತ್ರಯರಲ್ಲೊಬ್ಬನಾದ. ಆಕ್ಟೇವಿಯಸ್‍ನ ತಂಗಿಯನ್ನು ಮದುವೆಯಾದ. ಕೊಂಚಕಾಲ ವೈರಿಗಳನ್ನಡಗಿಸುವ ಕಾರ್ಯದಲ್ಲಿ ನಿರತನಾಗಿದ್ದು ಅನಂತರ ಸಾಮ್ರಾಜ್ಯದ ಏಷ್ಯ ಪ್ರಾಂತ್ಯಗಳಿಗೆ ಅಧಿಪತಿಯಾದ. ಈ ಕಾಲಕ್ಕೆ ಮುಂಚೆಯೇ ಈಜಿಪ್ಟಿನ ಕ್ಲಿಯೋಪಾತ್ರಳನ್ನು ಕಂಡು ಅವಳ ಸೌಂದರ್ಯ ಮೋಹಕತೆಗಳಿಗೆ ಮಾರುಹೋಗಿದ್ದ. ಅವಳ ಜೊತೆ ಅಲೆಕ್ಸಾಂಡ್ರಿಯದಲ್ಲಿ ನಿಂತು ತನ್ನ ಪ್ರಾಂತ್ಯವನ್ನಾಳತೊಡಗಿದ. ಇದರಿಂದ ಆಗಸ್ಟಸ್ ಇವನಿಗೂ ವೈರವುಂಟಾಗಿ ಒಳಯುದ್ಧ ಪ್ರಾರಂಭವಾಯಿತು. ಆಕ್ಟಿಯಂ ನೌಕಾಕದನದಲ್ಲಿ ಆಗಸ್ಟಸ್ ಇವನನ್ನು ಸೊಲಿಸಿ ಅಟ್ಟಿಸಿಕೊಂಡು ಹೋದ. ಸೆರೆಸಿಗುವುದು ಖಚಿತವೆಂದು ತಿಳಿದಾಗ ಆಂಟೋನಿಯಸ್ ಆತ್ಮಹತ್ಯೆ ಮಾಡಿಕೊಂಡ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ